Wednesday, 6 March 2013

ಬೆದರಿಸದಿರಿ ಹಾರೋ ಹಕ್ಕಿಗಳನು...

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧದ ನಮ್ಮ ಆಕ್ರೋಶ ಜಾಗೃತಿ ಮೂಡಿಸುವಂತಿರಬೇಕೇ ಹೊರತು ಹೊಸ ದಿಕ್ಕಿನತ್ತ ಆತ್ಮವಿಶ್ವಾಸದ ಹೆಜ್ಜೆ ಇಡುತ್ತಿರುವ ನಮ್ಮ ಹೆಣ್ಮಕ್ಕಳಲ್ಲಿ ಭೀತಿಯನ್ನು ಹುಟ್ಟಿಸಬಾರದು ಅಲ್ಲವೇ? ಮಹಿಳಾ ದಿನದ ನಿಮಿತ್ತ ಹೀಗೊಂದು ಚಿಂತನೆ.


ಮತ್ತೆ ಅತ್ಯಾಚಾರ, ಇನ್ನೊಂದು ದೌರ್ಜನ್ಯ. ಹೀಗೆಲ್ಲ ಆದರೆ ಈ ದೇಶದಲ್ಲಿ ಹೆಣ್ಣು ಮಕ್ಕಳು ಬದುಕುವುದಾದರೂ ಹೇಗೆ?-ಫೇಸ್ಬುಕ್ನಲ್ಲಿ ಕಳವಳದ ಸ್ಟೇಟಸ್ ಪ್ರತ್ಯಕ್ಷವಾಗಿತ್ತು. ಅದೆಷ್ಟೋ ತಾಯಂದಿರು ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋದರೆ ಭಯವಾಗುತ್ತದೆ ಅಂತ ಆತಂಕದಿಂದ ಹೇಳಿಕೊಳ್ಳುತ್ತಾರೆ. ಪ್ರತಿ ಹೆಣ್ಮಗಳ ಮನದಲ್ಲೊಂದು ದಿಗಿಲು, ಹೆಜ್ಜೆ ಹೆಜ್ಜೆಗೂ ಭಯದ ಭುಗಿಲು.
ಪ್ರತಿ ನಿತ್ಯವೂ ನಾವು ಕೇಳುತ್ತಿರುವ, ನೋಡುತ್ತಿರುವ ವಿದ್ಯಮಾನಗಳು ಇಂತಹುದೊಂದು ವಿಹ್ವಲತೆಯನ್ನು ಸೃಷ್ಟಿ ಮಾಡಿರುವುದು ನಿಜ. ಇಂದು ಎಲ್ಲೋ ಆದದ್ದು ನಾಳೆ ನಮ್ಮ ಮೇಲೆ ನಡೆಯದು ಎನ್ನುವುದಾದರೂ ಹೇಗೆ? ಇಂತಹುದು ನಡೆಯುತ್ತಲೇ ಇರುತ್ತದೆ.. ಈಗ ಹೆಚ್ಚೆಚ್ಚು ವರದಿಯಾಗುತ್ತಿದೆ ಅಷ್ಟೆ ಎಂದು ಸಾಗಹಾಕುವುದಾದರೂ ಹೇಗೆ? ಅಕ್ಕಪಕ್ಕದ ಬೀದಿಗಳ ಸಜ್ಜನರಂಥವರೆ ತಮ್ಮೊಳಗಿನ ಕ್ರೌರ್ಯವನ್ನು ತಣ್ಣಗೆ ಮೆರೆಯುತ್ತಿರುವುದು ಗೊತ್ತಾದ ಬಳಿಕವೂ ನಾವು ಸೇಫ್ ಅಂದುಕೊಳ್ಳುವುದಾದರೂ ಹೇಗೆ? ಅಮೆರಿಕದಂಥ ದೇಶಗಳಲ್ಲಿ ನಮಗಿಂತೂ ಹೆಚ್ಚು ಘಟನೆಗಳು ನಡೆಯುತ್ತಿವೆ ಎಂದ ಮಾತ್ರಕ್ಕೆ ನಮ್ಮನ್ನು ಕಾಡುವ ಸಂಗತಿಗಳನ್ನು ಮರೆ ಮಾಚುವುದಾದರೂ ಹೇಗೆ?

ಖಂಡಿತ ಸಾಧ್ಯವಿಲ್ಲ. ಹಾಗಂತ, ಬದುಕು ಅಂದ್ರೆ ಇಷ್ಟೇನಾ? ಹೆಣ್ಣು ಅಂದರೆ ಬರೀ ಅತ್ಯಾಚಾರ, ಕೀಟಲೆ, ಕೊಲೆ ಅಷ್ಟಕ್ಕೇ ಸೀಮಿತವಾ? ಅಥವಾ ಹೆಣ್ಣನ್ನು ಕೇವಲ ಆ ದೌರ್ಜನ್ಯದ ಮಾನದಂಡಗಳಲ್ಲಿ ಅಳೆದು ಸೀಮಿತಗೊಳಿಸುತ್ತಿದ್ದೇವಾ? ಆ ಮೂಲಕ ಹೀಗೇ ಆದರೆ ಹೆಣ್ಣಿಗೆ ಬದುಕೇ ಇಲ್ಲ ಅನ್ನೋ ಅವಸರದ ತೀರ್ಮಾನಕ್ಕೆ ಬರುತ್ತಿದ್ದೇವಾ?
ಕೆಲವರ ಮಾತುಗಳನ್ನು ಕೇಳುವಾಗ ಮೂಡುವ ಅನಿಸಿಕೆ ಇದು.
ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಎನ್ನುವ ಕಾಲಾಂತರದ ಗಂಡಾಂತರ ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ರೂಪಗಳಲ್ಲಿ ಬಿಚ್ಚಿಕೊಳ್ಳುತ್ತಿರುವುದು ಸರ್ವ ವೇದ್ಯ. ಚಲಿಸುವ ಬಸ್ಗಳಲ್ಲಿ, ಶಾಲೆಗಳಲ್ಲಿ, ಆಫೀಸುಗಳಲ್ಲಿ, ಮನೆಗಳಲ್ಲಿ ಎಲ್ಲ ಕಡೆಯೂ ಹೆಣ್ಣಿನ ಮೇಲೆ ಕೃತಿಮದ ಕಣ್ಣುಗಳು ಬೀಳುತ್ತಲೇ ಇವೆ. ಯಾವ ಹೆಣ್ಮಗಳಲ್ಲಿ ಕೇಳಿದರೂ ನೋವಿನ ಹತ್ತಾರು ಕಥೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ.
ಹಾಗಂತ, ಅಲ್ಲಿಗೇ ಹೆಣ್ಮಕ್ಕಳಿಗೆ ಬದುಕುವುದೇ ದುಸ್ತರ, ಮನೆಯೂ ಸುರಕ್ಷಿತವಲ್ಲ ಎಂಬ ಧಾಟಿಯಲ್ಲಿ ಮಾತನಾಡುವುದರಿಂದ ಭಯದ ತೀವ್ರತೆ ಮತ್ತು ಅವರನ್ನು ಮನೆಯೊಳಗೇ ಕಟ್ಟಿ ಹಾಕುವ ಹೊಸ ಪ್ರವೃತ್ತಿಗೆ ಕಾರಣವಾದೀತೇ ಹೊರತು ಅವರಲ್ಲೊಂದು ಜಾಗೃತಿ ಮೂಡಿಸುವ ಕೆಲಸವಾಗದು.
ಸೂಕ್ಷ್ಮವಾಗಿ ನೋಡಿದರೆ ಹೆಣ್ಮಕ್ಕಳನ್ನು ಕಟ್ಟಿ ಹಾಕುತ್ತಿರುವ, ಅವರನ್ನು ಪೀಡಿಸುತ್ತಿರುವ ಸಂಗತಿಗಳ ವಿಸ್ತಾರವನ್ನು ಗಮನಿಸಿದರೆ ಪ್ರಮಾಣ ದೊಡ್ಡದೇನೂ ಅಲ್ಲ. ಅಥವಾ ಹೆಣ್ಮಕ್ಕಳು ಬಾಚಿಕೊಂಡಿರುವ ಹೊಸ ಹೊಸ ಅವಕಾಶಗಳು, ಅವರ ಸಾಮರ್ಥ್ಯಕ್ಕೆ ಸಿಕ್ಕಿರುವ ಮನ್ನಣೆ, ಕಲಿಕೆಯ ಅವಕಾಶಗಳ  ಮುಂದೆ ಇದು ಸಣ್ಣದು. ಆದರೆ, ನಗಣ್ಯವಲ್ಲ.
ಪುರುಷ ಲೋಕಕ್ಕೆ ಸಮದಂಡಿಯಾಗಿ ನಿಂತಿರುವ, ಅಧಿಕಾರ, ನಿರ್ವಹಣೆ, ಕೌಟುಂಬಿಕ ನೆಲೆಗಳಲ್ಲಿ ಪುರುಷರಿಗಿಂತಲೂ ಪ್ರಾಬಲ್ಯವನ್ನು ಹೊಂದಿರುವ, ಸೂಕ್ಷ್ಮಜ್ಞತೆ, ತಾಳ್ಮೆ ಮತ್ತು ಕ್ರಿಯಾಶೀಲತೆಯಲ್ಲಿ ಗಂಡಸ್ತನದ ಅಹಂಕಾರ ಕೋಟೆಯನ್ನು ಮುರಿದಿರುವ ಹೆಣ್ಮಕ್ಕಳ ಬಾಳಿನಲ್ಲಿ ಇವತ್ತು ಶುಭ್ರ ಬೆಳಕಿನ ಹಲವು ದೀಪಗಳಿವೆ. ಜ್ವಾಜ್ವಲ್ಯಮಾನ ಬದುಕು ತೆರೆದುಕೊಳ್ಳುತ್ತಿದೆ. ನಿಧಾನವಾಗಿಯಾದರೂ ಮನೆಯೊಳಗಿನ ಕ್ರೌರ್ಯಗಳ ಪರಿಮಾಣ ತಗ್ಗುತ್ತಿದೆ. ಅತ್ತೆ-ಸೊಸೆಯರ ನಡುವಿನ ವೈಷಮ್ಯದಲ್ಲೂ ಒಂದಿಷ್ಟು ಬದಲಾವಣೆಯಾಗಿದೆ. ಕೃಷಿ ಕೂಲಿಯಿಂದ ಹಿಡಿದು ವಿಮಾನ ಓಡಿಸುವವರೆಗೆ, ಅಂಗಡಿಯ ಸೇಲ್ಸ್ನಿಂದ ಹಿಡಿದು ಆಕಾಶಯಾನದವರೆಗೂ ಎಲ್ಲದಕ್ಕೂ ಸಲ್ಲುತ್ತಿದ್ದಾರೆ.

ಇಂಥ ಹೊತ್ತಿನಲ್ಲಿ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸಗಳು ಚದುರಿದಂತೆ ನಡೆಯುತ್ತಲೇ ಇರುತ್ತದೆ. ಆದರೆ, ಅದೇ ಆತ್ಯಂತಿಕವಲ್ಲ ಎನ್ನುವುದು ಹೆಣ್ಮಕ್ಕಳೆಲ್ಲ ಅಪಾಯದಲ್ಲಿದ್ದಾರೆ ಅಂತ ಬೆದರಿಕೆಯ ದನಿಯಲ್ಲಿ ಮಾತನಾಡುವಾಗ ಅರಿವಿದ್ದರೆ ಚೆನ್ನ. ಯಾಕೆಂದರೆ, ಇಂಥ ಮಾತುಗಳು ಹೆಣ್ಮಕ್ಕಳ ಮುನ್ನುಗ್ಗುವಿಕೆಗೆ, ವಿಶಾಲ ಆಕಾಶದ ಕಡೆಗೆ ಕೈಚಾಚುವ ಮುಕ್ತ ಮನಸಿಗೆ ಘಾಸಿಯುಂಟು ಮಾಡುತ್ತದೆ.
ಇದರ ಬದಲಾಗಿ ಮಾಡಬೇಕಾಗಿರುವುದು ಹೆಣ್ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ, ಸಮಾಜವನ್ನು ಸೂಕ್ಷ್ಮವಾಗಿ ನೋಡುವ ದೃಷ್ಟಿ ನೋಡುವ ಕೆಲಸ, ಒಳಿತು-ಕೆಡುಕು, ಅವಕಾಶ-ಆಮಿಷಗಳ ನಡುವಿನ ತರ್ಕಬದ್ಧ ವ್ಯತ್ಯಾಸದ ಅರಿವನ್ನು ಮೂಡಿಸುವ ಕೆಲಸ. ವಿದ್ಯೆ, ಬುದ್ಧಿವಂತಿಕೆಯ ಜತೆ ವಿವೇಕ ಮತ್ತು ತರತಮ ಜ್ಞಾನವನ್ನು ಬೆಳೆಸುವ ಕೆಲಸ.
ಏನಂತೀರಾ?

Wednesday, 13 February 2013

ಯಾರಿಗೆ ಹೇಳಲಿ ಐ ಲವ್ ಯೂ ಅಂತ...

ಪ್ರೀತಿನ ಹೇಳಿಕೊಳ್ಳದಿದ್ದರೆ ಸತ್ತು ಹೋಗುತ್ತೆ ಅಂತಾರೆ.. ಹೇಳಿಕೊಂಡರೆ ಬದುಕುಳಿಯುತ್ತಾ? ಯಾರಿಗಂತ ಹೇಳಲಿ.. ಐ ಲವ್ ಯೂ ಅಂತ..


ಜತೆಗೇ ಸುತ್ತಾಡಿದರೂ ಪ್ರೀತಿಯನ್ನು ಹೇಳಿಕೊಳ್ಳಲಾಗದೆ.. ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲಾಗದೆ ಒಲ್ಲದ ಮನಸಿನಿಂದ ಮನ ಮೆಚ್ಚದ ಯಾರ್ಯಾರನ್ನೋ ಮದುವೆಯಾದವರು ನಮ್ಮ ನಡುವೆ ನೂರಾರು. ಅದಕ್ಕೇ ಹೇಳೋದು ಪ್ರೀತೀನ ಕೂಗಿ ಹೇಳ್ಬೇಕು.. ಜತೆಜತೆಗೇ ಇದ್ದರೂ, ಎಲ್ಲವನ್ನೂ ಹಂಚಿಕೊಂಡರೂ ಪ್ರೀತಿಯೊಂದು ಅರ್ಥವಾಗದೆ ಹೋಗುತ್ತೆ. ಹೇಳಿಕೊಳ್ಳದೆ ಹೋದರೆ ಕಳೆದೇ ಹೋಗುತ್ತೆ.. ಮತ್ತೆ ಪರಿತಪಿಸಬೇಕಾಗುತ್ತದೆ-ಹೀಗಂತ ಹೇಳುತ್ತೆ ಪ್ರೇಮ ಪುರಾಣ.
ನಿಜವಾ ಇದು? ಪ್ರೀತಿನ ಕೂಗಿ ಹೇಳ್ಳೇಬೇಕಾ?
ಪ್ರೀತಿ ಎಂದರೆ ಹದಯದ ಪಿಸುಮಾತು ಅಂತಾರೆ. ಮನಸುಗಳ ವೌನ ರಾಗ ಅಂತಾರೆ... ಅದನ್ನೇಕೆ ಐ ಲವ್ ಯೂ ಅನ್ನೋ ಪದಗಳಲ್ಲಿ ಕಟ್ಟಿಹಾಕಿ ಗಟ್ಟಿಯಾಗಿ ಕೂಗಿ ಹೇಳಬೇಕು? ಕೂಗಿ ಹೇಳೋದರಿಂದ ಪ್ರೀತಿ ಬೆಳಗುತ್ತಾ? ಉಳಿಯುತ್ತಾ? ಅಷ್ಟಕ್ಕೂ ಯಾರಿಗೆಲ್ಲ ಇದನ್ನು ಕೂಗಿ ಹೇಳಬೇಕು?

ಪ್ರೀತಿಯೊಂದು ಅಂತರಗಂಗೆ... ಒಳಗೆ ಆವಿರ್ಭವಿಸಿ ಝಿಲ್ಲನೆ ಚಿಮ್ಮಿ ಮೈಮನಗಳನ್ನು ಪುಳಕಗೊಳಿಸುವ ಮಧುರಾನುಭವ. ಪ್ರೀತಿಯ ಭಾವವೊಂದು ನಮ್ಮಳಗೆ ಹುಟ್ಟಿಸುವ ಜೀವನೋತ್ಸಾಹ, ಹಾಡಿಸುವ ಹೊಸ ಹಾಡು, ಉಕ್ಕಿಸುವ ಮಂದಹಾಸ, ನೀಡುವ ನವಚೆತನ್ಯಗಳೇ ಅದ್ಭುತ. ಐ ಆಮ್ ಇನ್ ಲವ್ ಅನ್ನೋದೇ ಒಂದು ದಿವ್ಯ ತೇಜಸ್ಸು.

ಅವಳಿಗಾಗಿ ಕಾದು ನಿಲ್ಲುವ ಕಾತರ, ಅವಳ ಕಳ್ಳ ನೋಟ, ಮುಂಗುರುಳನ್ನು ಹಿಂದಕ್ಕೆ ಸರಿಸಿ ಎತ್ತಿಕೊಟ್ಟ ಒಂದೇ ಒಂದು ಮುಗುಳ್ನಗೆ.. ಮನಸನ್ನು ಹಾರೋ ಗಾಳಿಪಟ ಮಾಡುತ್ತೆ.. ಅವಳು ನನ್ನನ್ನು, ನಾನು ಅವಳನ್ನು ಪ್ರೀತಿಸುತ್ತಿದ್ದೇವೆ ಎನ್ನುವ ಭಾವವೇ ಅನೂಹ್ಯ ಸಂಭ್ರಮವನ್ನು ಸೃಷ್ಟಿಸುತ್ತದೆ. ಆದರೆ, ಅವಳಲ್ಲೊಮ್ಮೆ ಪ್ರೀತಿಯನ್ನು ಹೇಳಿಕೊಂಡರೆ ಮತ್ತೇನಿದೆ?

ಜತೆ ಜತೆಗೇ ಇರುವಾಗ ಅವಳು ತೋರೋ ಕಾಳಜಿ, ಹೇಳುವ ನೂರು ಕಥೆಗಳು, ಕಣ್ಣಲ್ಲಿ ಮೂಡೋ ಹೊಳಪು.. ಅವಳ ಮಾತಿಗೆ ಕಾಯೋ ನನ್ನ ವೌನ... ಬೇಸರವೆಲ್ಲ ಮರೆತು ಹೋಗುವಷ್ಟು ಆಕೆ ತುಂಬುವ ಉಲ್ಲಾಸ... ಅವಳ-ನನ್ನ ನಡುವೆ ಇರುವುದು ಪ್ರೀತಿಯಾ? ಗೊತ್ತಿಲ್ಲ.. ನಾನಿನ್ನ ಪ್ರೀತಿಸುವೆ ಎಂದೇನಾದರೂ ಹೇಳಿಕೊಂಡರೆ ಅವಳ ಕಣ್ಣಲ್ಲಿ ಅಷ್ಟೇ ಹೊಳಪು.. ನನ್ನಲ್ಲಿ ಅಷ್ಟೇ ಕಾತರ ಉಳಿದೀತಾ?

ಅಷ್ಟಕ್ಕೂ ಯಾರಿಗೆ ಹೇಳಲಿ ಐ ಲವ್ ಯೂ ಅಂತ? ಯಾವಾಗ ಹೇಳಲಿ ಐ ಲವ್ ಯೂ ಅಂತ.
ಒಂದನೇ ಕ್ಲಾಸಲ್ಲೇ ಇಷ್ಟವಾದ ಉದ್ದ ಜಡೆಯ, ನೆರಿಗೆ ಲಂಗದ ಹುಡುಗಿಗೆ ಹೇಳಲೇನು? ಮೊದಲ ಬಾರಿ ಕನಸಿನಲ್ಲಿ ದಾಟಿ ಹೋದ ಅರಳು ನಗುವಿನ ಅವಳ ಮುಂದೆ ಪ್ರೇಮ ನಿವೇದಿಸಲೇನು? ಸಂಧ್ಯಾವಂದನೆಯ ಕೊನೆಯ ಪ್ರಾರ್ಥನೆಯಲ್ಲಿ ಅವಳೇ ಹೆಂಡತಿಯಾಗಲೆಂದು ಕೋರಿದ ಸ್ನಿಗ್ಧ ಸುಂದರಿಗೆ ಪ್ರೀತಿಸುವೆ ಎನ್ನಲೇನು? ಹತ್ತನೇ ಕ್ಲಾಸಿನ ಫೋಟೋದಲ್ಲಿ ಆಸೆಯಿಂದ ಹೋಗಿ ನಿಂತಿದ್ದೆನಲ್ಲ.. ಪಕ್ಕದಲ್ಲಿ.. ಅವಳ ಮುಂದೆ ಪ್ರೇಮ ಕಥೆ ಹೇಳಲೇನು?
ಕಾಲೇಜಲ್ಲಿ ಕಾಡಿದವಳು, ಬಸ್ಸಿನಲ್ಲಿ ನಿತ್ಯ ಜತೆಯಾದವಳು, ನನ್ನೆಲ್ಲ ನೋವಿಗೆ ಸಾಂತ್ವನವಾದವಳು, ನಗುವಿಗೆ ಕಾರಣಳಾದವಳು, ಗುಡ್ ಮಾರ್ನಿಂಗ್‌ನಿಂದ ಗುಡ್‌ನೆಟ್‌ವರೆಗೆ ಸಂಗಾತಿಯಾದವಳು, ಕೆಲಸ ಹೇಳಿಕೊಟ್ಟು ಗುಡ್ ಎಂದವಳು.. ಪ್ರತಿಯೊಬ್ಬರನ್ನು ಗಾಢವಾಗಿ ಪ್ರೀತಿಸಿದ್ದಾಗಿದೆ.. ಯಾರಿಗೆ ಹೇಳಿ.. ಐ ಲವ್ ಯೂ?

ಆರಂಭದ್ದು ಕ್ರಶ್ಶು, ನಂತರದ್ದು ಇನ್ ಫ್ಯಾಚುವೇಶನ್, ನಂತರದ್ದು ಪ್ಲಟಾನಿಕ್ ಲವ್ ಅಂತೆಲ್ಲ ವರ್ಗೀಕರಿಸೋರು ಯಾರು?  ಹಾಗಿದ್ದರೆ ಯಾವ ಹೊತ್ತಲ್ಲಿ ಅರಳುತ್ತೆ ನಿಜವಾದ ಪ್ರೀತಿ? ಪ್ರೀತಿಗೆ ವಯಸ್ಸಿನ ಹಂಗಿದ್ಯಾ? 21 ವರ್ಷದ ನಂತರವೇ ಪ್ರೀತಿ ಮಾಡಬೇಕಾ? ಪ್ರೀತಿ ಮಾಡಿದ ಮೇಲೆ ಮದುವೆ ಆಗಲೇಬೇಕಾ? ಮದುವೆ ಆದ ಮೇಲೆ.. ಒಬ್ಬಳನ್ನಷ್ಟೇ ಪ್ರೀತಿಸಬೇಕಾ? ಅಲ್ಲಿಗೆ ಪ್ರೀತಿಯ ಸಾವಿರ ಕನಸುಗಳೆಲ್ಲ ನುಚ್ಚುನೂರಾ?

ಎಂಥೆಂಥ ಪ್ರಶ್ನೆಗಳು ಅಲ್ವಾ?
ನಿಜವೆಂದರೆ ಪ್ರೀತಿ ಡೈನಾಮಿಕ್. ಅದು ಚಲನಶೀಲ. ಆರಂಭದಿಂದ ಕೊನೆವರೆಗೆ ವಿಭಿನ್ನ ನೆಲೆಗಳಲ್ಲಿ ಹರಿಯುತ್ತಾ, ಸಾಗುತ್ತಲೇ ಇರುತ್ತದೆ. ಹಾಗಿದ್ದರೆ ಅದಕ್ಕೆ ಕೊನೆ? ಬಹುಶ: ಯಾವತ್ತು ನಾವು ಐ ಲವ್ ಯೂ ಅಂತ ಹೇಳುತ್ತೇವೋ.. ಪ್ರೀತಿ ಅಲ್ಲಿಗೆ ಮುಗಿಯುತ್ತೆ.. ಮುಂದೆಂದೂ ಅದೇ ಪ್ರೀತಿ.. ಮತ್ತೊಂದಿಲ್ಲ. ಅಥವಾ ಅದು ನಿರಾಕರಿಸಲ್ಪಟ್ಟರೆ ಅಲ್ಲಿಗೇ ಆ ಪ್ರೀತಿಯ ಅಂತ್ಯ. ಪ್ರೀತಿಸಿ ಮದುವೆಯಾದವರು ನಿತ್ಯ ಪ್ರೇಮಿಗಳು ಅಂದುಕೊಳ್ಳಬೇಕಾಗಿಲ್ಲ. ಅಲ್ಲೂ ಬದುಕಿನ ಚಲನಶೀಲತೆ ಅದನ್ನು ನುಂಗಿಹಾಕುತ್ತದೆ.


ಆದರೆ, ಜಸ್ಟ್ ಒಮ್ಮೆ ಯೋಚನೆ ಮಾಡಿ.. ನಾವು ಬದುಕಿನಲ್ಲಿ ಎಷ್ಟೊಂದು ಜನರನ್ನು ಪ್ರೀತಿಸಿದೆವು? ಜತೆಗಿದ್ದರೂ ಹೇಳಿಕೊಳ್ಳದ ಪ್ರೀತಿ, ಕಳ್ಳನೋಟ ಬೀರಿದರೂ ಗೊತ್ತುಪಡಿಸದ ಪ್ರೀತಿ.. ನೆನಪಾಗುವ ಪ್ರತಿಯೊಂದು ಕೂಡಾ ಹೇಳಿಕೊಳ್ಳದೇನೇ ನಿಗೂಢವಾಗಿ ಉಳಿದು ಹೋಗಿದೆ. ಇವತ್ತಿಗೂ ಅವಳಿಗೂ ನೆನಪಾಗುತ್ತದೆ.. ಅದೊಂದು ಹೇಳಿಕೊಳ್ಳದ ಪ್ರೀತಿ ಇತ್ತು ಅಂತ. ಆ ಪ್ರೀತಿ ಇವತ್ತಿಗೂ ಇದ್ಯಾ? ಇದ್ದೇ ಇರುತ್ತದೆ.. ಯಾಕೆಂದರೆ, ಐ ಲವ್ ಯೂ ಅಂತ ಹೇಳುವ ಮೂಲಕ ಅದಕ್ಕೊಂದು ತಾರ್ಕಿಕ ಅಂತ್ಯ ಕೊಟ್ಟೇ ಇರುವುದಿಲ್ಲ!
ಬಹುಶ: ನಿರಂತರ ಹರಿಯೋ ಪ್ರೀತಿ ಅಂದರೆ ಇದೇ ಇರಬೇಕು..
ಈಗ ಹೇಳಿ.. ಪ್ರೀತೀನ ಹೇಳಿಕೊಳ್ಳಲೇಬೇಕಾ? ಹೇಳಿಕೊಳ್ಳದೆ ಇದ್ದರೆ ಅದು ಕಳೆದುಹೋಗುತ್ತಾ? ಹೇಳಿದರೆ ಬದುಕಿ ಉಳಿಯುತ್ತಾ?