Wednesday 6 March 2013

ಬೆದರಿಸದಿರಿ ಹಾರೋ ಹಕ್ಕಿಗಳನು...

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧದ ನಮ್ಮ ಆಕ್ರೋಶ ಜಾಗೃತಿ ಮೂಡಿಸುವಂತಿರಬೇಕೇ ಹೊರತು ಹೊಸ ದಿಕ್ಕಿನತ್ತ ಆತ್ಮವಿಶ್ವಾಸದ ಹೆಜ್ಜೆ ಇಡುತ್ತಿರುವ ನಮ್ಮ ಹೆಣ್ಮಕ್ಕಳಲ್ಲಿ ಭೀತಿಯನ್ನು ಹುಟ್ಟಿಸಬಾರದು ಅಲ್ಲವೇ? ಮಹಿಳಾ ದಿನದ ನಿಮಿತ್ತ ಹೀಗೊಂದು ಚಿಂತನೆ.


ಮತ್ತೆ ಅತ್ಯಾಚಾರ, ಇನ್ನೊಂದು ದೌರ್ಜನ್ಯ. ಹೀಗೆಲ್ಲ ಆದರೆ ಈ ದೇಶದಲ್ಲಿ ಹೆಣ್ಣು ಮಕ್ಕಳು ಬದುಕುವುದಾದರೂ ಹೇಗೆ?-ಫೇಸ್ಬುಕ್ನಲ್ಲಿ ಕಳವಳದ ಸ್ಟೇಟಸ್ ಪ್ರತ್ಯಕ್ಷವಾಗಿತ್ತು. ಅದೆಷ್ಟೋ ತಾಯಂದಿರು ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋದರೆ ಭಯವಾಗುತ್ತದೆ ಅಂತ ಆತಂಕದಿಂದ ಹೇಳಿಕೊಳ್ಳುತ್ತಾರೆ. ಪ್ರತಿ ಹೆಣ್ಮಗಳ ಮನದಲ್ಲೊಂದು ದಿಗಿಲು, ಹೆಜ್ಜೆ ಹೆಜ್ಜೆಗೂ ಭಯದ ಭುಗಿಲು.
ಪ್ರತಿ ನಿತ್ಯವೂ ನಾವು ಕೇಳುತ್ತಿರುವ, ನೋಡುತ್ತಿರುವ ವಿದ್ಯಮಾನಗಳು ಇಂತಹುದೊಂದು ವಿಹ್ವಲತೆಯನ್ನು ಸೃಷ್ಟಿ ಮಾಡಿರುವುದು ನಿಜ. ಇಂದು ಎಲ್ಲೋ ಆದದ್ದು ನಾಳೆ ನಮ್ಮ ಮೇಲೆ ನಡೆಯದು ಎನ್ನುವುದಾದರೂ ಹೇಗೆ? ಇಂತಹುದು ನಡೆಯುತ್ತಲೇ ಇರುತ್ತದೆ.. ಈಗ ಹೆಚ್ಚೆಚ್ಚು ವರದಿಯಾಗುತ್ತಿದೆ ಅಷ್ಟೆ ಎಂದು ಸಾಗಹಾಕುವುದಾದರೂ ಹೇಗೆ? ಅಕ್ಕಪಕ್ಕದ ಬೀದಿಗಳ ಸಜ್ಜನರಂಥವರೆ ತಮ್ಮೊಳಗಿನ ಕ್ರೌರ್ಯವನ್ನು ತಣ್ಣಗೆ ಮೆರೆಯುತ್ತಿರುವುದು ಗೊತ್ತಾದ ಬಳಿಕವೂ ನಾವು ಸೇಫ್ ಅಂದುಕೊಳ್ಳುವುದಾದರೂ ಹೇಗೆ? ಅಮೆರಿಕದಂಥ ದೇಶಗಳಲ್ಲಿ ನಮಗಿಂತೂ ಹೆಚ್ಚು ಘಟನೆಗಳು ನಡೆಯುತ್ತಿವೆ ಎಂದ ಮಾತ್ರಕ್ಕೆ ನಮ್ಮನ್ನು ಕಾಡುವ ಸಂಗತಿಗಳನ್ನು ಮರೆ ಮಾಚುವುದಾದರೂ ಹೇಗೆ?

ಖಂಡಿತ ಸಾಧ್ಯವಿಲ್ಲ. ಹಾಗಂತ, ಬದುಕು ಅಂದ್ರೆ ಇಷ್ಟೇನಾ? ಹೆಣ್ಣು ಅಂದರೆ ಬರೀ ಅತ್ಯಾಚಾರ, ಕೀಟಲೆ, ಕೊಲೆ ಅಷ್ಟಕ್ಕೇ ಸೀಮಿತವಾ? ಅಥವಾ ಹೆಣ್ಣನ್ನು ಕೇವಲ ಆ ದೌರ್ಜನ್ಯದ ಮಾನದಂಡಗಳಲ್ಲಿ ಅಳೆದು ಸೀಮಿತಗೊಳಿಸುತ್ತಿದ್ದೇವಾ? ಆ ಮೂಲಕ ಹೀಗೇ ಆದರೆ ಹೆಣ್ಣಿಗೆ ಬದುಕೇ ಇಲ್ಲ ಅನ್ನೋ ಅವಸರದ ತೀರ್ಮಾನಕ್ಕೆ ಬರುತ್ತಿದ್ದೇವಾ?
ಕೆಲವರ ಮಾತುಗಳನ್ನು ಕೇಳುವಾಗ ಮೂಡುವ ಅನಿಸಿಕೆ ಇದು.
ಹೆಣ್ಮಕ್ಕಳ ಮೇಲಿನ ದೌರ್ಜನ್ಯ ಎನ್ನುವ ಕಾಲಾಂತರದ ಗಂಡಾಂತರ ಇತ್ತೀಚಿನ ದಿನಗಳಲ್ಲಿ ವೈವಿಧ್ಯಮಯ ರೂಪಗಳಲ್ಲಿ ಬಿಚ್ಚಿಕೊಳ್ಳುತ್ತಿರುವುದು ಸರ್ವ ವೇದ್ಯ. ಚಲಿಸುವ ಬಸ್ಗಳಲ್ಲಿ, ಶಾಲೆಗಳಲ್ಲಿ, ಆಫೀಸುಗಳಲ್ಲಿ, ಮನೆಗಳಲ್ಲಿ ಎಲ್ಲ ಕಡೆಯೂ ಹೆಣ್ಣಿನ ಮೇಲೆ ಕೃತಿಮದ ಕಣ್ಣುಗಳು ಬೀಳುತ್ತಲೇ ಇವೆ. ಯಾವ ಹೆಣ್ಮಗಳಲ್ಲಿ ಕೇಳಿದರೂ ನೋವಿನ ಹತ್ತಾರು ಕಥೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ.
ಹಾಗಂತ, ಅಲ್ಲಿಗೇ ಹೆಣ್ಮಕ್ಕಳಿಗೆ ಬದುಕುವುದೇ ದುಸ್ತರ, ಮನೆಯೂ ಸುರಕ್ಷಿತವಲ್ಲ ಎಂಬ ಧಾಟಿಯಲ್ಲಿ ಮಾತನಾಡುವುದರಿಂದ ಭಯದ ತೀವ್ರತೆ ಮತ್ತು ಅವರನ್ನು ಮನೆಯೊಳಗೇ ಕಟ್ಟಿ ಹಾಕುವ ಹೊಸ ಪ್ರವೃತ್ತಿಗೆ ಕಾರಣವಾದೀತೇ ಹೊರತು ಅವರಲ್ಲೊಂದು ಜಾಗೃತಿ ಮೂಡಿಸುವ ಕೆಲಸವಾಗದು.
ಸೂಕ್ಷ್ಮವಾಗಿ ನೋಡಿದರೆ ಹೆಣ್ಮಕ್ಕಳನ್ನು ಕಟ್ಟಿ ಹಾಕುತ್ತಿರುವ, ಅವರನ್ನು ಪೀಡಿಸುತ್ತಿರುವ ಸಂಗತಿಗಳ ವಿಸ್ತಾರವನ್ನು ಗಮನಿಸಿದರೆ ಪ್ರಮಾಣ ದೊಡ್ಡದೇನೂ ಅಲ್ಲ. ಅಥವಾ ಹೆಣ್ಮಕ್ಕಳು ಬಾಚಿಕೊಂಡಿರುವ ಹೊಸ ಹೊಸ ಅವಕಾಶಗಳು, ಅವರ ಸಾಮರ್ಥ್ಯಕ್ಕೆ ಸಿಕ್ಕಿರುವ ಮನ್ನಣೆ, ಕಲಿಕೆಯ ಅವಕಾಶಗಳ  ಮುಂದೆ ಇದು ಸಣ್ಣದು. ಆದರೆ, ನಗಣ್ಯವಲ್ಲ.
ಪುರುಷ ಲೋಕಕ್ಕೆ ಸಮದಂಡಿಯಾಗಿ ನಿಂತಿರುವ, ಅಧಿಕಾರ, ನಿರ್ವಹಣೆ, ಕೌಟುಂಬಿಕ ನೆಲೆಗಳಲ್ಲಿ ಪುರುಷರಿಗಿಂತಲೂ ಪ್ರಾಬಲ್ಯವನ್ನು ಹೊಂದಿರುವ, ಸೂಕ್ಷ್ಮಜ್ಞತೆ, ತಾಳ್ಮೆ ಮತ್ತು ಕ್ರಿಯಾಶೀಲತೆಯಲ್ಲಿ ಗಂಡಸ್ತನದ ಅಹಂಕಾರ ಕೋಟೆಯನ್ನು ಮುರಿದಿರುವ ಹೆಣ್ಮಕ್ಕಳ ಬಾಳಿನಲ್ಲಿ ಇವತ್ತು ಶುಭ್ರ ಬೆಳಕಿನ ಹಲವು ದೀಪಗಳಿವೆ. ಜ್ವಾಜ್ವಲ್ಯಮಾನ ಬದುಕು ತೆರೆದುಕೊಳ್ಳುತ್ತಿದೆ. ನಿಧಾನವಾಗಿಯಾದರೂ ಮನೆಯೊಳಗಿನ ಕ್ರೌರ್ಯಗಳ ಪರಿಮಾಣ ತಗ್ಗುತ್ತಿದೆ. ಅತ್ತೆ-ಸೊಸೆಯರ ನಡುವಿನ ವೈಷಮ್ಯದಲ್ಲೂ ಒಂದಿಷ್ಟು ಬದಲಾವಣೆಯಾಗಿದೆ. ಕೃಷಿ ಕೂಲಿಯಿಂದ ಹಿಡಿದು ವಿಮಾನ ಓಡಿಸುವವರೆಗೆ, ಅಂಗಡಿಯ ಸೇಲ್ಸ್ನಿಂದ ಹಿಡಿದು ಆಕಾಶಯಾನದವರೆಗೂ ಎಲ್ಲದಕ್ಕೂ ಸಲ್ಲುತ್ತಿದ್ದಾರೆ.

ಇಂಥ ಹೊತ್ತಿನಲ್ಲಿ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸಗಳು ಚದುರಿದಂತೆ ನಡೆಯುತ್ತಲೇ ಇರುತ್ತದೆ. ಆದರೆ, ಅದೇ ಆತ್ಯಂತಿಕವಲ್ಲ ಎನ್ನುವುದು ಹೆಣ್ಮಕ್ಕಳೆಲ್ಲ ಅಪಾಯದಲ್ಲಿದ್ದಾರೆ ಅಂತ ಬೆದರಿಕೆಯ ದನಿಯಲ್ಲಿ ಮಾತನಾಡುವಾಗ ಅರಿವಿದ್ದರೆ ಚೆನ್ನ. ಯಾಕೆಂದರೆ, ಇಂಥ ಮಾತುಗಳು ಹೆಣ್ಮಕ್ಕಳ ಮುನ್ನುಗ್ಗುವಿಕೆಗೆ, ವಿಶಾಲ ಆಕಾಶದ ಕಡೆಗೆ ಕೈಚಾಚುವ ಮುಕ್ತ ಮನಸಿಗೆ ಘಾಸಿಯುಂಟು ಮಾಡುತ್ತದೆ.
ಇದರ ಬದಲಾಗಿ ಮಾಡಬೇಕಾಗಿರುವುದು ಹೆಣ್ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ, ಸಮಾಜವನ್ನು ಸೂಕ್ಷ್ಮವಾಗಿ ನೋಡುವ ದೃಷ್ಟಿ ನೋಡುವ ಕೆಲಸ, ಒಳಿತು-ಕೆಡುಕು, ಅವಕಾಶ-ಆಮಿಷಗಳ ನಡುವಿನ ತರ್ಕಬದ್ಧ ವ್ಯತ್ಯಾಸದ ಅರಿವನ್ನು ಮೂಡಿಸುವ ಕೆಲಸ. ವಿದ್ಯೆ, ಬುದ್ಧಿವಂತಿಕೆಯ ಜತೆ ವಿವೇಕ ಮತ್ತು ತರತಮ ಜ್ಞಾನವನ್ನು ಬೆಳೆಸುವ ಕೆಲಸ.
ಏನಂತೀರಾ?